Friday, February 15, 2008

ಕೆಲವು ಸ್ನೇಹಿತರ ಆದುನಿಕ ನುಡಿ ಮುತ್ತು...

ಗಡಿಯಾರ ನಿಜಕ್ಕೂ ಕೋಮುವಾದಿ,ಸಂಪ್ರದಾಯವಾದಿ,ಆಸ್ತಿಕ. ಅದರ ಮುಳ್ಳುಗಳು ಯಾವಾಗಲೂ ಪ್ರದಕ್ಷಿಣೆಯನ್ನೇ ಹಾಕುತ್ತವೆ.
——————————————
ಆಲೋಚನೆಗಳು ಬರೋದು ಕೇವಲ ಯೋಚನೆ ಮಾಡಿದಾಗ ಮಾತ್ರ.
——————————————
ನಿಮ್ಮನ್ನು ಬೇರೆಯವರು ಹೊಗಳಬೇಕೆಂದು ಬಯಸಿದರೆ ನೀವು ಮೊದಲು ಹೊಗಳಬೇಕಾಗುತ್ತದೆ, ಮನಸಾರೆಯಲ್ಲದಿದ್ರೂ ಬಾಯ್ತುಂಬಾನಾದ್ರೂ.
——————————————
ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡೂ ಒಟ್ಟಿಗೇ ಇರಲೊಲ್ಲವು. ಅದಕ್ಕೇ ಸಾಮಾನ್ಯವಾಗಿ ಹುಡುಗಿಯರು ಎರಡನೆಯದನ್ನು ಮದುವೆ ಸಮಯದಲ್ಲಿ ಮರೆತುಬಿಡುತ್ತಾರೆ. ಇಲ್ಲದಿದ್ದಲ್ಲಿ ಬಹಳಷ್ಟು ಹುಡುಗರು ಅವಿವಾಹಿತರಾಗಿಯೇ ಉಳಿಯಬೇಕಾಗುತ್ತಿತ್ತು.
——————————————
ವಿವಾದಾಸ್ಪದ ವ್ಯಕ್ತಿಗಳನ್ನು ವಿವಾದಗಳಿಂದ ದೂರ ಉಳಿಯದಂತೆ ಮಾಡುವವರನ್ನು ನಿಜವಾದ ಪತ್ರಕರ್ತರೆನ್ನಬಹುದು.
——————————————
ಯಾವ ವಿಷಯವನ್ನು ಕೊಟ್ಟರೂ ಮಾತಾಡಬಲ್ಲವರು ಯಾವ ವಿಷಯವಿಲ್ಲದೆಯೂ ಮಾತಾಡಬಲ್ಲರು.
——————————————
ಸಾಯಬೇಕು ಅಂತಾ ನಿರ್ಧರಿಸಿ ವಿಫಲರಾದವರಲ್ಲಿ ಅನೇಕರು ಸತ್ತಿಲ್ಲ. ಜೈಲು ಸೇರಿದ್ದಾರೆ. ಮತ್ತಿನ್ನೇನು ಬೇಕು?
——————————————
ಬದುಕು ಅರ್ಥಪೂರ್ಣವಾಗಬೇಕಾದರೆ ಮೊದಲು ಬದುಕಿನಲ್ಲಿ “ಅರ್ಥ”ವಿರಬೇಕು.
——————————————
ಬದುಕಿಗೊಂದು ಅರ್ಥ ಇರಬೇಕೆಂದು ಬಯಸುವವರು ಶಬ್ಧ ಕೋಶ ನೋಡಬಹುದು.
——————————————
ಕಾಲೇಜುಗಳಲ್ಲಿ ವಿವಾದ, ಫೇಮಸ್ ಆಗುವುದನ್ನು ಎರಡನ್ನೂ ಬಯಸಿದರೆ ಹುಡುಗಿಯನ್ನು ಪ್ರೀತಿಸಬಹುದು.
——————————————
ಗಾ”ಸಿಪ್ಪು”ಗಳನ್ನು ಬಯಸುವವರು ಹುಡುಗಿಯರನ್ನು ಪ್ರೀತಿಸಬಹುದು. ಆದರೆ ಯಾರನ್ನಾದರೂ ಮದುವೆಯಾದರೆ ಆ ಗಾಳಿಮಾತುಗಳು ಕೇವಲ ಇತಿಹಾಸದ ಪುಟ ಸೇರುತ್ತವೆ. ನಿಜವಾಗಿಯೂ ಪ್ರೀತಿಸಬೇಕಾದ ಅನಿವಾರ್ಯತೆ ಇದ್ದರೆ “ಪ್ರಾಣಿ”ಗಳು ಬಹಳಷ್ಟಿವೆ..!
——————————————
ಮದುವೆ ಮನೆಯಲ್ಲಿ ಊಟಕ್ಕೆ ಎಂದೂ ಸುಂದರ ಹುಡುಗಿ(ಅಥವಾ ಹುಡುಗಿಯರ) ಮುಂದೆ ಕೂರಬಾರದು. ಅತ್ತ ಸೌಂದರ್ಯ ಆಸ್ವಾದನೆಯೂ ಆಗುವುದಿಲ್ಲ. ಇತ್ತ “ಮೃಷ್ಟಾನ್ನ” ಭೋಜನವೂ ಆಗುವುದಿಲ್ಲ.
——————————————
ಉಸಿರುಗಟ್ಟಿಸುವ ವಾತಾವರಣ= ಪಕ್ಷಾಂತರ ಮಾಡಿದ ವ್ಯಕ್ತಿಯಿಂದ ಹಿಂದಿದ್ದ ಪಕ್ಷದ ಬಗೆಗಿನ ಮೊದಲ ಹೇಳಿಕೆ.
——————————————
ಬಹಳಷ್ಟು ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದೇ ಇರುವುದರಿಂದ, ಯಾವ ಮಟ್ಟದಲ್ಲಿ ಯಶಸ್ವಿಯಾಗುತ್ತವೋ ಅಷ್ಟು ಮಾತ್ರ ನಿರೀಕ್ಷೆಗಳನ್ನಿಟ್ಟುಕೊಳ್ಳಬೇಕು.
——————————————
ರಸ್ತೆ ವಿಭಾಜಕ(dividers)ಗಳಿಲ್ಲದಿದ್ದರೆ ಮೊದಲು ಸಾಯೋರು ವೃತ್ತದಲ್ಲಿರೋ ಪೊಲೀಸರು.
——————————————
ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಅಗತ್ಯವಾಗಿ ಮುದ್ರಿಸಬೇಕಾದ ಆಧುನಿಕ ಒಕ್ಕಣಿಕೆ “ಇಲ್ಲಿ ಬರುವ ಪಾತ್ರಗಳು ಕೇವಲ ಕಾಲ್ಪನಿಕ ಮಾತ್ರ. ಇದಕ್ಕೂ ಅವರ ನಿಜ ಜೀವನಕ್ಕೂ ಯಾವುದೇ ಸಂಬಂಧವಿಲ್ಲ.” ಹಾಗೇನಾದರೂ ಇದ್ದಲ್ಲಿ ಅದು ಕೇವಲ ಕಾಕ”ತಾಳೀ”ಯ ಮಾತ್ರ..!
——————————————
ಕಾರಿನ ಉಪಯೋಗಗಳು
ಕರ್ರಗಿರುವವರು, ತಮ್ಮನ್ನು ತಾವು ಕುರೂಪಿಗಳೆಂದುಕೊಂಡು ಕೀಳರಿಮೆ ಹೊಂದಿರುವವರು ಕಪ್ಪು ಗಾಜಿನ ಹಿಂದೆ ನಿರಾಯಾಸವಾಗಿ ಎಲ್ಲೆಂದರಲ್ಲಿ ತಿರುಗಾಡಬಹುದು.
ಇದರ ಮಹೋನ್ನತ ಪರಮೋದ್ದೇಶ “ತನ್ನನ್ನಿಟ್ಟುಕೊಂಡವರಿಗೆ” ಗೌರವ “ಕಲ್ಪಿಸುವುದು”.
ಕಾರು ಬಹಳಸಲ ಬೇಕೆನ್ನಿಸುವುದು ಮಳೆಗಾಲದಲ್ಲಿ “ನೆನೆಯುತ್ತಿರುವಾಗ” ಮತ್ತು ಬಿರು-ಬಿಸಿಲಲ್ಲಿ ನೆಡೆಯುತ್ತಿರುವಾಗ.
——————————————
ಹುಡುಗರು ಜುಬ್ಬಾ ಧರಿಸಿದಾಗಲೇ ಹುಡುಗಿಯರು ಚೂಡಿದಾರ ಧರಿಸಿದಾಗ ಆಗುವ ತಾಪ”ತ್ರಯ”ಗಳು ಅರ್ಥವಾಗುವುವು.
ಎಲ್ಲೆಂದರಲ್ಲಿ ಕೂಡುವುದು ಕಷ್ಟವಾಗುತ್ತದೆ.
ಗಾಡಿಯ ಮೇಲೆ ಎರಡೂ ಬದಿ ಕಾಲು ಹಾಕಿ ಕೂರುವಾಗ ಬರುವ ಸಂಕಟ.
ಕೆಲವೊಮ್ಮೆ ಪೈ”ಜಾಮ್” ಆಗುವ ಸಂಭವವಿರುತ್ತದೆ…!
——————————————
ಜೊತೆಯಲ್ಲಿ ಮೊಬೈಲಿದ್ದರೆ, ಜೀವನಕ್ಕೆ ಒಂಥರಾ Spice(ಮಸಾಲೆ) ದೊರೆತಂತೆ. ಅದೇ ಜೊತೆಯಲ್ಲಿ ಹುಡುಗಿಯಿದ್ದರೆ, Airtel(ಗಾಳಿಮಾತು)….!
——————————————
ಪ್ರೇಯಸಿ ಸೇವುಪೂರಿ(ಸ್ವಲ್ಪ ಖಾರ) ಹೆಂಡತಿ ಪಾನಿಪೂರಿ(ಸ್ವಲ್ಪ ಹುಳಿ).
——————————————
ತಲೆಯಲ್ಲಿ ಕೂದಲು ಉದುರಲಿಕ್ಕೆ ಪ್ರಾರಂಭಿಸಿದರೆ ಏನಂದುಕೊಳ್ಳಬಹುದು?
ತನಗೂ ತಲೆ ಇದೆ ಅಂದುಕೊಳ್ಳಬಹುದು!
ಉದುರುವ ಮೊದಲು ತನಗೂ ಕೂದಲಿದ್ದವು ಎಂಬ ಗತಕಾಲದ ವೈಭವವನ್ನೂ, ನೆನಪನ್ನೂ ಫ್ಲಾಶ್‌ಬ್ಯಾಕಿನಂತೆ ಸವಿಯಬಹುದು.
ಉದುರಿದ ಪ್ರತಿಯೊಂದು ಕೂದಲು ಉದಾತ್ತ ಚಿಂತನೆಯ ಪ್ರತಿಫಲದ ಪ್ರತೀಕ ಅಂದುಕೊಳ್ಳಬಹುದು!
ತನಗೂ “ಯಜಮಾನಿಕೆ” ಬರುತ್ತಿದೆ ಎಂದುಕೊಳ್ಳಬಹುದು.
ತಮ್ಮ ಹೆಸರಿನ ಮುಂದೆ “ಚಿಂತಕರು”,”ಬುದ್ಧಿ ಜೀವಿಗಳು”,”ಮೇಧಾವಿಗಳು” ಅಂತ ಬರೆಸಿಕೊಳ್ಳಬಹುದು! (ತಲೆಯ ಮೇಲಲ್ಲ)
——————————————
ನಗೆಯು ಮದ್ದು. ಅದಕ್ಕೇ ಅದು ಸಿಡಿಯುತ್ತದೆ!
ನೈತಿಕತೆ ಇಂದು ಬದುಕಿಲ್ಲ ಏಕೆಂದರೆ ಅದರದೇ “ನಿತ್ಯ(ಕೈಲಾಸ)ಸಮಾರಾಧನೆ” ನೆಡೆಯುತ್ತದೆ!
ಮೈ ಮುರಿವಷ್ಟು ಕೆಲಸವಿದ್ದರೆ ಮೈಮುರಿಯುವುದಕ್ಕೆ ಅವಕಾಶವೇ ಸಿಗುವುದಿಲ್ಲ!
—————————————
ಮೊಬೈಲಿಗೂ ಹೊಸಾ ಹೆಂಡತಿಗೂ ಇರುವ ಸಾಮ್ಯಗಳು
ನಮಗೆ ಬೇಡವಾದಗಲೇ ತುಂಬಾ ಶಬ್ಧ ಮಾಡಿ ಕಿರಿಕ್ ಮಾಡುತ್ತವೆ, ಕಾಡುತ್ತವೆ
ಯಾವಾಗಲೂ ಹೃದಯಕ್ಕೆ ಹತ್ತಿರದ ಸ್ಥಳದಲ್ಲೇ ಇರಲು ಬಯಸುತ್ತವೆ
ಮೊದಮೊದಲು ತನ್ನ ಮೇಲೆ ಕೈಹಾಕಿ ಊರೆಲ್ಲಾ ಸುತ್ತಾಡಿಸು ಎನ್ನುತ್ತವೆ.
ಹೊಸತರಲ್ಲಿ ಕಂಡ ಕಂಡವರಿಗೆಲ್ಲಾ ಪರಿಚಯಿಸು ಎನ್ನುತ್ತವೆ.
ತಮ್ಮ ಸೌಂದರ್ಯದ ಗುಣಗಾನ ಮಾಡಬೇಕೆಂದು ಬಯಸುತ್ತವೆ.
ಎರಡನ್ನು ಕೊಂಡಾಗಲೂ ಒಂದೇ ಥರಾ ಅನುಭವಗಳಾಗುತ್ತವೆ. ಸ್ವಲ್ಪ ಕಾದಿದ್ದರೆ ಹೊಸಾ “ಮಾಡೆಲ್” ಸಿಗಬಹುದಿತ್ತೇನೋ.
ಹೆಂಡತಿಯನ್ನು ಮೆಸ್ಸೆಂಜರ್‌ಆಗಿ ಬಳಸಲು ಸಾಧ್ಯವಾಗದವರು ಮೊಬೈಲನ್ನೇ ಹೆಂಡತಿಯಾಗಿ ಬಳಸಬಹುದು.
ನೀವು ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದನ್ನು ಬೇರೆಯವರಿಗೆ ತಿಳಿಸಲು ಮೊಬೈಲು ಶುಲ್ಕ ವಿಧಿಸಿದರೆ ಆ ಕೆಲಸವನ್ನ ಹೆಂಡತಿ ಪುಕ್ಕಟೆ ಮಾಡುತ್ತಾಳೆ
—————————————
ನಾನು ಎಲ್ಲರಂತೆ ಸಾಮಾನ್ಯವಾಗಿ ಯೋಚಿಸಿದ್ದರೆ, ಹೀಗೆ ಅಸಾಮಾನ್ಯವಾಗಿ ಯೋಚಿಸಲು ಆಗುತ್ತಿರಲಿಲ್ಲ..!
ಚಿಂತೆಗಳು ಎಂದೂ ಅನಾಥವಲ್ಲ. ನಾವುಗಳೇ ಅವುಗಳಿಗೆ ಅನ್ನದಾತರು..ಸೃಷ್ಟಿದಾತರು!!
ನಾನು ಏಕಾಂತದಲ್ಲಿದ್ದಾಗ ಏಕಾಂಗಿಯಾಗಿರುತ್ತೇನೆ ಮತ್ತು ಒಬ್ಬಂಟಿಯಾಗಿರುತ್ತೇನೆ.
ಏಕಾಂಗಿಯಾಗಿದ್ದಾಗ ಬರುವ ಯೋಚನೆಗಳು ಎಂದೂ ಏಕಾಂಗಿತನ ಅನುಭವಿಸುವುದೇ ಇಲ್ಲ!
-------------------------------------------
ರೂಪಸಿಯಾದ ಹುಡುಗಿಗೂ ಕಿಟಕಿಗೂ ವ್ಯತ್ಯಾಸವೇನು? ಪಕ್ಕದಲ್ಲಿ ಕಿಟಕಿಯಿದ್ದರೆ ನೀವು ಹೊರ ಜಗತ್ತನ್ನು ನೋಡಬಹುದು. ಪಕ್ಕದಲ್ಲಿ ಹುಡುಗಿಯಿದ್ದರೆ, ಹೊರಜಗತ್ತು ನಿಮ್ಮನ್ನು ನೋಡುತ್ತಿರುತ್ತದೆ. ನಿಮಗೆ ಮಾತ್ರ ಹೊರ ಜಗತ್ತು ಮರೆತುಹೋಗುತ್ತದೆ.
——————————————
Love Marriage: marriage ಮುಂಚೆ ಲವ್
Marriage love: marriage ಆದಮೇಲೆ ಲವ್.
ಎರಡಕ್ಕೂ ಅಂಥ ವ್ಯತ್ಯಾಸವೇನೂ ಇಲ್ಲ.
ಎರಡೂ ಆರಂಭಶೂರತೆಗಳೇ ಎರಡೂ ಅಲ್ಪಾಯುಷಿಗಳೇ!
——————————————
ಮೋರಿ ಮೆಮೋರಿಗೂ ಎರಡೂ ಒಂದೇ ಥರ. ಬೇಡದ್ದೆಲ್ಲವೂ ಅಲ್ಲಿಗೇ ಹೋಗೋದು.
——————————————
ಪಾಸ್‍ಪೋರ್ಟ್ ಸೈಜ್ ಫೋಟೋ ತೆಗೆಸೋಕೆ ಯಾವ ಪ್ಯಾಂಟ್ ಬೇಕಾದ್ರೂ ಹಾಕಿಕೊಂಡು ಹೋಗಬಹುದು!
——————————————
ಡ್ರೈವಿಂಗ್ ಸ್ಕೂಲಿನಲ್ಲಿ ದೇವರ ಫೋಟೊಗಳಿಗಿಂತ ಟ್ರಾಫಿಕ್ ಸಿಗ್ನಲ್‍ಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ.
——————————————
ನೀವು ಬರೆದ ಲೇಖನವನ್ನು ಬೇರೆಯವರಿಗೆ ತೋರಿಸುವಾಗ ದುರಾದೃಷ್ಟವೆಂದರೆ ನಿಮ್ಮ ಲೇಖನವನ್ನು ನೀವೇ ಓದುವಂತೆ ನಟಿಸಬೇಕಾಗುತ್ತದೆ.
——————————————
ದೂರದಿಂದ ಸುಂದರಿ “ಎನಿಸುವ” ಹುಡುಗಿ ಹತ್ತಿರದಿಂದಲೂ ಹಾಗೇನೇ ಕಾಣುವುದು ಅಪ”ರೂಪ”.
——————————————
ಮದುವೆ ಆಗುವ ಹುಡುಗಿ “ಮನೆಗೆಲಸ” ಮಾಡಿಕೊಂಡು ಹೋಗಬೇಕೆಂದು ಬಯಸುವವರು ಮನೆಗೆಲಸದವಳನ್ನೇ ಮದುವೆ ಆಗಬಹುದು. ಹಾಗೆಯೇ ತನ್ನನ್ನು ಮದುವೆ ಆಗುವ ಹುಡುಗನಿಗೆ ಅಡುಗೆ ಬರಬೇಕೆಂಬ ಹುಡುಗಿ ಅಡುಗೆ ಭಟ್ಟನನ್ನೇ ಮದುವೆ ಆಗಬಹುದು
___________________________________________________________