Tuesday, February 5, 2008

ಹಳೆಯ ಹನಿಗಳು

ಹಳೆಯ ಹನಿಗಳು
ಕಾರಣವಿಲ್ಲದೆ
ಮುಖ ತಿರುಗಿಸಿ ಹೋದವಳ
ಹಿಂದೆ ಹೋಗಲು
ಕಾರಣ ಹುಡುಕುತ್ತಿದ್ದೇನೆ
~~~*~~~
ಚಂದ್ರನ
ಮೊಗವ ನೋಡಲು
ನನ್ನ ಚಂದ್ರಮುಖಿ ಕಣ್ಣೆತ್ತಲು
ಚಂದ್ರ ಅವಳ ಕಣ್ಮಿಂಚಿಗೆ ನಾಚಿ
ಮೋಡಗಳ ಸೆರಗು ಎಳೆದುಕೊಂಡ
~~~*~~~
ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು
~~~*~~~
ಅವಳು
ಒಂದೇ ಸಮನೆ
ಬಿಕ್ಕುತ್ತಿದ್ದಳು;
ಕಾರಣರ್ಯಾರೋ?ಜಾರುವ
ಆ ಕಣ್ಣ ಹನಿಗಳಲ್ಲಿ
ನನ್ನದೇ ಮುಖವಿತ್ತು...............
...............................................................................
ಕಲ್ಲು ,ಕಲೆ ಮತ್ತು ಅವಳು
ಕಲ್ಲು ಮನಸಿನಲಿ
ಕಲೆಯ ತಂದೇನೆಂದಳು.
ಕಲ್ಲು ಮುಟ್ಟಿದಳು,
ಪರೀಕ್ಷಿಸಿದಳು.
ಕೆತ್ತಿದಳು, ನಕ್ಕಳು.
ಹಿತವೆನಿಸುತ್ತಿತ್ತು ನನಗೂ!

ಮರುಕ್ಷಣ ಏನನ್ನಿಸಿತೋ
ಜೋರಾಗಿ ಹೊಡೆದಳು
ಕೆಡವಿದಳು ಕಲ್ಲಿನಂತ ನನ್ನನ್ನು
ಬಂಡೆಗಲ್ಲಾಗಿದ್ದ ನಾನು
ಈಗ ಚೂರು ಚೂರಾಗಿದ್ದೇನೆ........
.................................................................
ನಿನ್ನ ಕಂಗಳು
ಬಾನೊಳು ಹುಣ್ಣಿಮೆಯ ಚಂದ್ರನಂತೆ
ಅಲ್ಲೇ ಪಕ್ಕದಲ್ಲಿ
ನಗುತ್ತಿವೆ ಚುಕ್ಕಿಗಳಂತೆ
ಸುತ್ತೆಲ್ಲ ಬೆಳದಿಂಗಳ ಹಬ್ಬವಂತೆ
ಇಲ್ಲಿ ಮಿಂಚು ಹುಳುಗಳು
ದೀಪ ಹಿಡಿದು ಹಾರುತ್ತಿವೆಯಂತೆ
ಹಾಗೆನ್ನುತ್ತಿದ್ದಾರೆ ಜನರೆಲ್ಲ
ನನಗೆ ಇದ್ಯಾವ ಕುರುಡುತನ!
ಹಾಂ! ಗೊತ್ತಾಯ್ತು ಬಿಡು
ನಿನ್ನ ಜೋಡಿ ಕಂಗಳಿಲ್ಲಿ ಇಲ್ಲ ನೋಡು
ಅದಕೆ ಬರಿಯ ಕತ್ತಲು
ನಿನ್ನ ಒಂದು ನೋಟ ಸಾಕು
ಬಾಳ ದೀಪ ಬೆಳಗಲು........................
,.,.,.,.,..,.,.,.,.,.,.,.,.,..,.,.,.,.,.,.,.,.,..,.,.,.,.,.,.,.,.,...,,.,.,.
ತಿಳಿದಿರಲಿಲ್ಲ
ಸೆರಗಂಚಿನಿಂದ ಕಣ್ಣೀರ ಒರೆಸಿ
ನಿಮ್ಮ ಪಾದಗಳಿಗೊರಗುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಪುಣ್ಯ ಸ್ಪರ್ಶವೆಂದು
ಮೆಲ್ಲನೆ ನೀವು ಹೊಸ್ತಿಲನು
ದಾಟಿಕದ ಹಿಡಿದು ಹಿಂತಿ
ರುಗಿ ನೋಡುವಾಗ ತಿಳಿದಿರಲಿಲ್ಲ .

ನನಗಂದು ಕಡೆಯ ಹೊನ್ನ ದಿನವೆಂದು
ಪಂಚೆಯೆತ್ತಿ ಮೆಟ್ಟಿಲನು ಇಳಿಯುತ್ತ
ಅಂಗಳದ ರಂಗೋಲಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಬಣ್ಣದ ಕಡೆಯ ಮೆರುಗೆಂದು
ಮಲ್ಲಿಗೆ ಬಳ್ಳಿಯಿಂದಾರಿಸಿಬಿರಿದ
ಮೊಗ್ಗು ನೀವು ಮುಡಿಯಿಲ್ಲಿಡುವಾಗ
ತಿಳಿದಿರಲಿಲ್ಲ ನನಗಂದು
ಬಾಳ ಕಡೆಯ ಕಂಪೆಂದು

ಅಂಗಳವ ದಾಟಿ, ಕೇರಿಯ ದಾರಿಯಲ್ಲಿ
ನೀವು ನಡೆಯುತ್ತ, ತಿರುಗುವಾಗ
ತಿಳಿದಿರಲಿಲ್ಲ ನನಗಂದು
ನಿಮ್ಮ ಕಡೆಯ ನೋಟವೆಂದು.......................
,.,.,.,.,.,.,.,.,.,.,.,.,.,.,.,.,.,.,.,.,..,.,.,.,.,..,.,.,.,.,...,.,.,..,.,.,..,,.,,.Hrg
ಕೇಳೇ ನನ್ನವ್ವ
ಬೇಲಿ ಮ್ಯಾಲಿನ ಬಳ್ಳಿ
ಬಳ್ಳ್ಯೊಳು ಹೂ ಬೆಳ್ಳಿ
ಸಾಲಾಗಿ ಅರಳಿ ನಿಂತ್ಯಾವ, ನನ್ನವ್ವ
ಕೈಬೀಸಿ ನನ್ನ ಕರೆದಾವ

ಮಣ್ಣಿನ ಮಡಿಕೆಯು
ಬೆಣ್ಣಿಯ ಗಡಗಿಯು
ಬೆರಳಿಡಿದು ನನ್ನ ನಡೆಸ್ಯಾವ,
ನನ್ನವ್ವನನ್ ಕೂಡೆ ಭಾರಿ ನಗುತಾವ

ಅಂಕಣದ ಚಪ್ಪರ
ಹರಿದರಿದು ನೋಡ್ಯಾರ
ಚಂದಿರ,ನೂರು ಚುಕ್ಕಿಗಳು, ನನ್ನವ್ವ
ಮನದುಂಬಿ ನನ್ನ ಹರಸಾರ

ಬೆಟ್ಟದ ಮೇಲಿನ
ಕಟ್ಟೆಯ ಕರಿದೇವ
ಕರುಣೆಯ ಕಣ್ಣ ತೆರಕೊಂಡು, ನನ್ನವ್ವ
ಕಾದಾನೆ ನನ್ನ ಕೈಬಿಡದೆ
ಚಿಂತಿಮಾಡತಿ ಯಾಕ?
ನಗ್ತೀನಿ ಇರತನಕ
ಉಸಿರಾಗ ನಿನ್ನ ಹಾಡೈತಿ ,
ನನ್ನವ್ವಹಸಿರಾಗತೈತಿ ನನ ಬಾಳ.............................
,.,.,.,.,.,.,.,.,.,.,.,.,..,.,..,.,.,.,.,.,.,.,.,.,.,.,.,.,.,.,..,.,,.,.,.,.,,.,.,.
ಹಳೆಯ ದಾರಿ
ಎಲ್ಲೋ ಸಾಗಬೇಕಿದ್ದ ದಾರಿ
ಮತ್ತೆಲ್ಲೋ ತಿರುವ ತೋರಿ
ಹಳೆಯ ದಾರಿಯಿಂದ ಸರಿದು
ತಿರುವ ಸುತ್ತಿ ಮುಂದುವರಿದುಬಹು
ದೂರ ಬಂದಾಗಹಿಂದೆ ತಿರುಗಿ ನೋಡಿದಾಗ
ಹಳೆಯದೆಲ್ಲ ನೆನಪಾಗಿ
ಮನಸು ಮತ್ತೆ ಭಾರವಾಗೆ
ನಗುತಲೆ ಮುಂದುವರಿವೆ
ಹಳೆಯ ದಾರಿ ಮುಂದೆ
ಮತ್ತೆ ಸಿಕ್ಕೀತೆಂದು......................
ನೆನಪಿನಾಳದಿಂದ ಅಮ್ಮ
ಅಮ್ಮ ಒಬ್ಬಳೇ ಎಲ್ಲರಿಗೂ - ಹಾಗೇ ನನಗೂ
ಅವಳ ನೆನೆಯಲು ಸುಖ ಮಿಶ್ರಿತ ದು:ಖ
ಅವಳು ಹತ್ತಿರ ಸುಳಿಯೇ ಮನಕಾನಂದ
ಜಗದಲಿ ನನಗವಳೇ ಸ್ಫುರದ್ರೂಪಿ

ಅಂದದ ದುಂಡು ಮುಖಕೆ ಅಂಟಿನ ಕುಂಕುಮ
ಕೆನ್ನೆಗೆ ಸುವಾಸಿತ ಅರಿಶಿನದ ಲೇಪನ
ಕೊರಳೆಂದೂ ಕಾಣಲಿಲ್ಲ ಒಂದಪರಂಜಿ ಚಿನ್ನ
ಎಂದಿಗೂ ಬಿಟ್ಟುಕೊಡಲಿಲ್ಲ ತನ್ನತನವನ್ನ

ಓಂನಾಮ ಕಲಿಸಿದವಳೇ ನೀನಲ್ಲವೇನಮ್ಮ
ಕೃಶಕಾಯನಿಗೆ ಹೆಚ್ಚಿನ ಆರೈಕೆ ನೀಡಿದೆಯಮ್ಮ
ಕೈತುತ್ತ ನೀಡಿ ಅಮೃತ ಉಣಿಸಿದವಳು
ನನ್ನ ಪುಂಡಾಟಿಕೆಯ ಸಹಿಸಿದವಳು

ಪೂಜೆಗೆ ಪಾರಿಜಾತ ಹೆಕ್ಕಿ ತರಿಸಿದವಳು
ಅದರಲಿ ಹಾರ ಮಾಡಲು ಕಲಿಸಿದವಳು
ಎಂದೂ ಕೈ ಚಾಚದಂತಹ ಪಾಠ ಕಲಿಸಿದವಳು
ಇತರರ ನೋವು ನನ್ನದೆಂದು ತೋರಿಸಿದವಳು

ಜೀವನದ ಮರ್ಮ ಅರುಹಿದ ಮಹಾತಾಯಿ
ಪೂಜೆ ಪುನಸ್ಕಾರದ ಪರಿ ಕಲಿಸಿದವಳು
ಇಲ್ಲದಿದ್ದರೂ ಕೊಡುಗೈ ಆಗಿಸಿದವಳು
ನಾನೆಂತು ತೀರಿಸಬಲ್ಲೆ ಆ ನಿನ್ನ ಮಾತೃ ಋಣ

ಅಪ್ಪನ ನೊಗಕೆ ಸಾಟಿಯಾಗಿ ಹೆಗಲು ಕೊಟ್ಟವಳು
ಎಂದಿಗೂ ಮಕ್ಕಳಿಂದ ನಿರೀಕ್ಷಿಸದವಳು
ಕಡುಬಡತನದಲೂ ಬಿಡಲಿಲ್ಲ ಸ್ವಾಭಿಮಾನ
ಲೋಕದಿಂದ ನಮಗೆ ತಂದಿತ್ತ ದೊಡ್ಡ ಬಹುಮಾನ

ನೀನಂದು ನನ್ನ ಬಿಟ್ಟು ಹೋದೆಯಲ್ಲ
ನೀ ಹೀಗೆ ಮೋಸಿಸುವೆಯೆಂದು ನಾ ತಿಳಿದಿರಲಿಲ್ಲ
ಒಂದು ಕ್ಷಣದ ನನ್ನ ಅಚಾತುರ್ಯ
ನೀ ತೀರಿಸಿದೆ ಇಹಲೋಕದ ಕಾರ್ಯ

ಮತ್ತೆ ಹೇಗೆ ನಾ ಸರಿಪಡಿಸಲಿ ನನ್ನ ತಪ್ಪು
ನಾ ನೀಡಲಾರೆನೆ ನಿನಗೊಂದು ಹಿಡಿ ಉಪ್ಪು
ಎಲ್ಲರ ಮನಗಳಲಿ ನಿನ್ನ ಕಾಣುತಿಹೆ
ಎಲ್ಲರಲಿ ನಿನ ಕಂಡು ಋಣ ತೀರಿಸುವೆ........{ವಿಶಾಲ್।}
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ನಾ ಕಂಡ ಹೋಲಿ
ಈಗೀಗ ಹೋಲಿ ಆಚರಣೆಯಲ್ಲಿ ಮಾದಕತೆ ತುಂಬಿದೆ
ಕುಡಿಯಲು ಭಾಂಗ್ (ಮತ್ತೇರಿಸುವ ಪೇಯ) ಬೇಕೇ ಬೇಕು.
ಪ್ರಾಪ್ತ ವಯಸ್ಕ ಗಂಡು ಹೆಣ್ಣುಗಳು ಬೀದಿ ಬೀದಿಯಲ್ಲಿ ರಂಗು ರಂಗಿನ ನೀರಿನಲ್ಲಿ ತೊಯ್ದು ತೊಪ್ಪೆಯಾಗಿ ಚೆಲ್ಲಾಟವಾಡಿ ನೋಡುಗರನ್ನೂ ಉತ್ತೇಜಿಸುವ ದೃಷ್ಯ ಸರ್ವೇ ಸಾಮಾನ್ಯ

ಈ ವರ್ತನೆ ನಿಜವಾಗಲೂ ಈ ಹಬ್ಬದ ದ್ಯೋತಕವೇ?

ಹಬ್ಬ ಬರಲು ಕಾಲೋನಿ ಮಂದಿಯೆಲ್ಲ ಸಂತಸದಿ ನಲಿಯುತಿಹರು
ಹಿರಿಯ ಕಿರಿಯ ಗಂಡು ಹೆಣ್ಣು ಭೇದವಿಲ್ಲದೆ ಕುಣಿಯುತಿಹರು

ಬಣ್ಣಗಳ ಎರಚಿ ಓಕುಳಿಯಲಿ ನಲಿದಾಡಿ
ಕಾಮ ಮದ ಮೋಹ ಸ್ವಾರ್ಥಗಳ ಬದಿಗೊತ್ತಿ
ಬೇಕಿಲ್ಲದ ಪೈಶಾಚೀ ಕೃತ್ಯಗಳ ದಮನಿಸಿ
ಸಮನ್ವಯೀ ಜೀವನಕೆ ದಾರಿ ತೋರಿಪ ಹೋಲಿ

ಮದನನ ಸುಟ್ಟು ಬೂದಿ ಮಾಡಿದ ಮುಕ್ಕಣ್ಣ
ಪ್ರಹ್ಲಾದನ ಸುಡಲು ಹೋದ ಹೋಲಿಕಾಳ ಮದಿಸಿದ ದಿನ
ಪರಮ ಪುರುಷ ಕೃಷ್ಣ ಚೈತನ್ಯರು ಹುಟ್ಟಿದ ದಿನ
ವೃಂದಾವನದಿ ಶ್ರೀ ಕೃಷ್ಣ ನಲಿದ ದಿನ ಈ ಹೋಲಿ

ಆದರೇನು! ಇಂಥ ನಾಡಿನಲಿ ನೋಡುವದೇನು
ಬೀದಿ ಬೀದಿಗಳಲಿ ಪಡ್ಡೆ ಹುಡುಗ ಹುಡುಗಿಯರು
ರುಂಡ ಮುಂಡಗಳಿಗೆ ಬಣ್ಣದ ನೀರು ಸುರುವಿಕೊಂಡು
ಕಾಮ ಮೋಹಗಳ ಪ್ರದರ್ಶಿಸುವ ಈ ದಿನ ಹೋಲಿ {ವಿಶಾಲ್..}
...................................................................................

ಕನಸು
ಕತ್ತಲ ರಾತ್ರಿಯಲಿ,
ಹೊದಿಕೆಯ ಒಳಗೆ
ಕಣ್ಣು ಮುಚ್ಚಿ,ನಿದ್ರೆ ಹೋಗಿ
ಕಂಡ ಕನಸುಗಳೆಷ್ಟೊ ;

ಹೂವಿನ ಹಾದಿಗಳೆಷ್ಟೊ!
ಬೆಳಗಾಗುವ ಮುನ್ನ,
ಕಣ್ಣು ತೆರೆಯುವ ಮುನ್ನ
ಅಳಿಸಿ ಹೋದ,ಹಳಸಿ ಹೋದ
ನವಿರು ಕನಸುಗಳೆಷ್ಟೊ!
ಇಂದಿಲ್ಲಿ ಹಗಲಾಗಿದೆ,
ಕಣ್ಣು ತೆರೆದಿದೆಮನದಲ್ಲಿ
ಹೊಸತು ಕನಸು

ಹೂವಿನ ಹಾದಿಯೇ
ನಿಲ್ಲಹುರುಪು ತುಂಬಿ,
ಛಲವ ಬಿತ್ತಿಮುಂದೆನ್ನ
ಕಥೆ ಬರೆಯುವಸರಳ ಕನಸಷ್ಟೆ!
....................................................................