Tuesday, February 5, 2008

ಹಳೆಯ ಹನಿಗಳು

ಹಳೆಯ ಹನಿಗಳು
ಕಾರಣವಿಲ್ಲದೆ
ಮುಖ ತಿರುಗಿಸಿ ಹೋದವಳ
ಹಿಂದೆ ಹೋಗಲು
ಕಾರಣ ಹುಡುಕುತ್ತಿದ್ದೇನೆ
~~~*~~~
ಚಂದ್ರನ
ಮೊಗವ ನೋಡಲು
ನನ್ನ ಚಂದ್ರಮುಖಿ ಕಣ್ಣೆತ್ತಲು
ಚಂದ್ರ ಅವಳ ಕಣ್ಮಿಂಚಿಗೆ ನಾಚಿ
ಮೋಡಗಳ ಸೆರಗು ಎಳೆದುಕೊಂಡ
~~~*~~~
ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು
~~~*~~~
ಅವಳು
ಒಂದೇ ಸಮನೆ
ಬಿಕ್ಕುತ್ತಿದ್ದಳು;
ಕಾರಣರ್ಯಾರೋ?ಜಾರುವ
ಆ ಕಣ್ಣ ಹನಿಗಳಲ್ಲಿ
ನನ್ನದೇ ಮುಖವಿತ್ತು...............
...............................................................................
ಕಲ್ಲು ,ಕಲೆ ಮತ್ತು ಅವಳು
ಕಲ್ಲು ಮನಸಿನಲಿ
ಕಲೆಯ ತಂದೇನೆಂದಳು.
ಕಲ್ಲು ಮುಟ್ಟಿದಳು,
ಪರೀಕ್ಷಿಸಿದಳು.
ಕೆತ್ತಿದಳು, ನಕ್ಕಳು.
ಹಿತವೆನಿಸುತ್ತಿತ್ತು ನನಗೂ!

ಮರುಕ್ಷಣ ಏನನ್ನಿಸಿತೋ
ಜೋರಾಗಿ ಹೊಡೆದಳು
ಕೆಡವಿದಳು ಕಲ್ಲಿನಂತ ನನ್ನನ್ನು
ಬಂಡೆಗಲ್ಲಾಗಿದ್ದ ನಾನು
ಈಗ ಚೂರು ಚೂರಾಗಿದ್ದೇನೆ........
.................................................................
ನಿನ್ನ ಕಂಗಳು
ಬಾನೊಳು ಹುಣ್ಣಿಮೆಯ ಚಂದ್ರನಂತೆ
ಅಲ್ಲೇ ಪಕ್ಕದಲ್ಲಿ
ನಗುತ್ತಿವೆ ಚುಕ್ಕಿಗಳಂತೆ
ಸುತ್ತೆಲ್ಲ ಬೆಳದಿಂಗಳ ಹಬ್ಬವಂತೆ
ಇಲ್ಲಿ ಮಿಂಚು ಹುಳುಗಳು
ದೀಪ ಹಿಡಿದು ಹಾರುತ್ತಿವೆಯಂತೆ
ಹಾಗೆನ್ನುತ್ತಿದ್ದಾರೆ ಜನರೆಲ್ಲ
ನನಗೆ ಇದ್ಯಾವ ಕುರುಡುತನ!
ಹಾಂ! ಗೊತ್ತಾಯ್ತು ಬಿಡು
ನಿನ್ನ ಜೋಡಿ ಕಂಗಳಿಲ್ಲಿ ಇಲ್ಲ ನೋಡು
ಅದಕೆ ಬರಿಯ ಕತ್ತಲು
ನಿನ್ನ ಒಂದು ನೋಟ ಸಾಕು
ಬಾಳ ದೀಪ ಬೆಳಗಲು........................
,.,.,.,.,..,.,.,.,.,.,.,.,.,..,.,.,.,.,.,.,.,.,..,.,.,.,.,.,.,.,.,...,,.,.,.
ತಿಳಿದಿರಲಿಲ್ಲ
ಸೆರಗಂಚಿನಿಂದ ಕಣ್ಣೀರ ಒರೆಸಿ
ನಿಮ್ಮ ಪಾದಗಳಿಗೊರಗುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಪುಣ್ಯ ಸ್ಪರ್ಶವೆಂದು
ಮೆಲ್ಲನೆ ನೀವು ಹೊಸ್ತಿಲನು
ದಾಟಿಕದ ಹಿಡಿದು ಹಿಂತಿ
ರುಗಿ ನೋಡುವಾಗ ತಿಳಿದಿರಲಿಲ್ಲ .

ನನಗಂದು ಕಡೆಯ ಹೊನ್ನ ದಿನವೆಂದು
ಪಂಚೆಯೆತ್ತಿ ಮೆಟ್ಟಿಲನು ಇಳಿಯುತ್ತ
ಅಂಗಳದ ರಂಗೋಲಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಬಣ್ಣದ ಕಡೆಯ ಮೆರುಗೆಂದು
ಮಲ್ಲಿಗೆ ಬಳ್ಳಿಯಿಂದಾರಿಸಿಬಿರಿದ
ಮೊಗ್ಗು ನೀವು ಮುಡಿಯಿಲ್ಲಿಡುವಾಗ
ತಿಳಿದಿರಲಿಲ್ಲ ನನಗಂದು
ಬಾಳ ಕಡೆಯ ಕಂಪೆಂದು

ಅಂಗಳವ ದಾಟಿ, ಕೇರಿಯ ದಾರಿಯಲ್ಲಿ
ನೀವು ನಡೆಯುತ್ತ, ತಿರುಗುವಾಗ
ತಿಳಿದಿರಲಿಲ್ಲ ನನಗಂದು
ನಿಮ್ಮ ಕಡೆಯ ನೋಟವೆಂದು.......................
,.,.,.,.,.,.,.,.,.,.,.,.,.,.,.,.,.,.,.,.,..,.,.,.,.,..,.,.,.,.,...,.,.,..,.,.,..,,.,,.Hrg
ಕೇಳೇ ನನ್ನವ್ವ
ಬೇಲಿ ಮ್ಯಾಲಿನ ಬಳ್ಳಿ
ಬಳ್ಳ್ಯೊಳು ಹೂ ಬೆಳ್ಳಿ
ಸಾಲಾಗಿ ಅರಳಿ ನಿಂತ್ಯಾವ, ನನ್ನವ್ವ
ಕೈಬೀಸಿ ನನ್ನ ಕರೆದಾವ

ಮಣ್ಣಿನ ಮಡಿಕೆಯು
ಬೆಣ್ಣಿಯ ಗಡಗಿಯು
ಬೆರಳಿಡಿದು ನನ್ನ ನಡೆಸ್ಯಾವ,
ನನ್ನವ್ವನನ್ ಕೂಡೆ ಭಾರಿ ನಗುತಾವ

ಅಂಕಣದ ಚಪ್ಪರ
ಹರಿದರಿದು ನೋಡ್ಯಾರ
ಚಂದಿರ,ನೂರು ಚುಕ್ಕಿಗಳು, ನನ್ನವ್ವ
ಮನದುಂಬಿ ನನ್ನ ಹರಸಾರ

ಬೆಟ್ಟದ ಮೇಲಿನ
ಕಟ್ಟೆಯ ಕರಿದೇವ
ಕರುಣೆಯ ಕಣ್ಣ ತೆರಕೊಂಡು, ನನ್ನವ್ವ
ಕಾದಾನೆ ನನ್ನ ಕೈಬಿಡದೆ
ಚಿಂತಿಮಾಡತಿ ಯಾಕ?
ನಗ್ತೀನಿ ಇರತನಕ
ಉಸಿರಾಗ ನಿನ್ನ ಹಾಡೈತಿ ,
ನನ್ನವ್ವಹಸಿರಾಗತೈತಿ ನನ ಬಾಳ.............................
,.,.,.,.,.,.,.,.,.,.,.,.,..,.,..,.,.,.,.,.,.,.,.,.,.,.,.,.,.,.,..,.,,.,.,.,.,,.,.,.
ಹಳೆಯ ದಾರಿ
ಎಲ್ಲೋ ಸಾಗಬೇಕಿದ್ದ ದಾರಿ
ಮತ್ತೆಲ್ಲೋ ತಿರುವ ತೋರಿ
ಹಳೆಯ ದಾರಿಯಿಂದ ಸರಿದು
ತಿರುವ ಸುತ್ತಿ ಮುಂದುವರಿದುಬಹು
ದೂರ ಬಂದಾಗಹಿಂದೆ ತಿರುಗಿ ನೋಡಿದಾಗ
ಹಳೆಯದೆಲ್ಲ ನೆನಪಾಗಿ
ಮನಸು ಮತ್ತೆ ಭಾರವಾಗೆ
ನಗುತಲೆ ಮುಂದುವರಿವೆ
ಹಳೆಯ ದಾರಿ ಮುಂದೆ
ಮತ್ತೆ ಸಿಕ್ಕೀತೆಂದು......................

No comments: